ಪ್ರವಾಸೋದ್ಯಮ ಅಭಿವೃದ್ಧಿ ಹಿನ್ನೆಲೆಯಲ್ಲಿ ಬಜೆಟ್‍ನಲ್ಲೇ ಘೊಷಣೆಯಾಗಿದ್ದ `ಮಂಗಳೂರು ಸರ್ಫಿಂಗ್ ಉತ್ಸವ’ಕ್ಕೆ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಇದುವರೆಗೆ ಯಾವುದೇ ಸ್ಪಂದನೆ ಸಿಗದ ಕಾರಣ ಸತತ ಎರಡನೇ ವರ್ಷ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ವರ್ಷ ನಿಂತು ಹೋಗಿದ್ದ ಮಂಗಳೂರು ಸರ್ಫಿಂಗ್ ಉತ್ಸವವನ್ನು ಈ ಬಾರಿ ಲೋಕಸಭೆ ಚುನಾವಣೆ ಇದ್ದರೂ ನಡೆಸಲು ಜಿಲ್ಲಾಡಳಿತ ತಯಾರಿ ನಡೆಸಿತ್ತು. ಆದರೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಸರ್ಫಿಂಗ್ ಉತ್ಸವ ನಡೆಸಲು ಆಸಕ್ತಿ ವಹಿಸದ ಕಾರಣ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡುವ ಅವಕಾಶದಿಂದ ಮಂಗಳೂರು ವಂಚಿತವಾಗಿದೆ.
ಮಂಗಳೂರು ಹೊರವಲಯದ ಸಸಿಹಿತ್ಲು ಕಡಲ ಕಿನಾರೆಯಲ್ಲಿ ಸರ್ಫಿಂಗ್ ಉತ್ಸವ ನಡೆಸುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಿಲ್ಲಾಡಳಿತ ಮೂಲಕ ಕಳೆದ ಜನವರಿಯಲ್ಲೇ ಪ್ರಸ್ತಾವನೆ ಕಳುಹಿಸಲಾಗಿತ್ತು. ಇದಕ್ಕೆ ಬೇಕಾಗುವ ಅನುದಾನವನ್ನು ಬಿಡುಗಡೆ ಮಾಡುವಂತೆ ಕೋರಲಾಗಿತ್ತು. ಆದರೆ ರಾಜ್ಯ ಸರಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಜಿಲ್ಲಾಡಳಿತಕ್ಕೆ ಬಂದಿಲ್ಲ.