ಮಂಗಳೂರು: ತುಳು ಸಾಹಿತ್ಯ ಅಕಾಡೆಮಿಯು ಬೆಳ್ಳಿ ಹಬ್ಬದ ಅಂಗವಾಗಿ ಕರಾವಳಿಯ ಪ್ರಮುಖ ಬಸ್ ನಿಲ್ದಾಣ, ರೈಲು ನಿಲ್ದಾಣ, ವಿಮಾನ ನಿಲ್ದಾಣದಲ್ಲಿ ತುಳುನಾಡಿನ ತಿಂಡಿ ತಿನಸುಗಳನ್ನು ಪರಿಚಯ ಮಾಡುವ ಯೋಜನೆಯೊಂದನ್ನು ಕೈಗೊಳ್ಳಲಾಗಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಅನ್ಯ ರಾಜ್ಯ ಮತ್ತು ವಿದೇಶಗಳಿಂದಲೂ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು, ಅವರಿಗೆ ಈ ನೆಲದ ಭಾಷೆ, ಸಂಸ್ಕೃತಿ, ತಿಂಡಿ-ತಿನಿಸು ಪರಿಚಯಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ವಿದೇಶಗಳಿಗೆ ನಾವು ಹೋದಾಗ ಅಲ್ಲಿನವರು ಅವರ ಸಂಸ್ಕೃತಿಯನ್ನು ಪರಿಚಯಿಸುತ್ತಾರೆ. ಅದೇ ರೀತಿ ನಮ್ಮಲ್ಲಿಗೆ ಬರುವ ವಿದೇಶಿಗರಿಗೆ ತುಳು ನಾಡಿನ ಸಂಸ್ಕೃತಿಯ ಪರಿಚಯ ವಾಗಬೇಕು ಎಂಬ ನಿಟ್ಟಿನಲ್ಲಿ ತುಳು ಸಾಹಿತ್ಯ ಅಕಾಡೆಮಿಯು ಈ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.
ತುಳುನಾಡಿನ ಮಳಿಗೆಗಳಲ್ಲಿ ತುಳುನಾಡ ಮುಟ್ಟಾಳೆ, ಕಂಬಳದ ಬೆತ್ತ, ಗೆರಟೆ ಸಹಿತ ಕರಕುಶಲ ವಸ್ತುಗಳು ಅಲ್ಲದೆ ತುಳುನಾಡಿನ ಅಧ್ಯಯನದ ಪುಸ್ತಕ ಗಳೂ ಇರಲಿವೆ. ತುಳು ಲಿಪಿಯನ್ನು ಪರಿಚಯಿಸುವ ಉದ್ದೇಶದಿಂದ ಮರದ ಕೀ-ಬಂಚ್‌ನಲ್ಲಿ ತುಳು ಲಿಪಿಯಲ್ಲಿ ಹೆಸರು ಬರೆದುಕೊಡುವ ಸೌಲಭ್ಯವೂ ಇರುತ್ತದೆ.
ನೀರುದೋಸೆ, ಬನ್ಸ್, ಪತ್ರೊಡೆ, ಗೋಳಿಬಜೆ ಸಹಿತ ತುಳುನಾಡಿನ ಪ್ರಸಿದ್ಧ ತಿನಿಸುಗಳನ್ನು ಬಸ್, ರೈಲು ಮತ್ತು ವಿಮಾನ ನಿಲ್ದಾಣಗಳಿಗೆ ಹೊಂದಿಕೊಂಡಿರುವ ಹೊಟೇಲ್‌ಗಳಲ್ಲಿ ಸಿಗುವಂತೆ ಮಾಡಲು ಚಿಂತನೆ ನಡೆಯುತ್ತಿದೆ.