ಸರಕಾರಿ ಶಾಲೆಗಳಲ್ಲಿ ಸರಕಾರ ನೀಡಿದ ಶಿಕ್ಷಕರ ಸಂಖ್ಯೆ ಸಾಲದಾದಾಗ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾಭಿವೃದ್ಧಿ ಸಮಿತಿ ಗೌರವ ಶಿಕ್ಷಕರನ್ನು ನೇಮಿಸುತ್ತದೆ. ಆದರೆ ಹೀಗೆ ನೇಮಕ ಮಾಡುವ ಗೌರವ ಶಿಕ್ಷಕರಿಗೆ ವೇತನ ನೀಡಲು ಪರದಾಡುವಂತಹ ಪರಿಸ್ಥಿತಿ ಇದೆ. ಇದಕ್ಕೆ ಭಿನ್ನವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಓಜಲ ಶಾಲೆ ಮಲ್ಲಿಗೆ ಬೆಳೆದು ಶಿಕ್ಷಕಿಯರ ವೇತನ ಭರಿಸುತ್ತಿದೆ.
ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಓಜಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಈ ಶಾಲೆಯ ಒಳಗೆ ವಿದ್ಯಾಭ್ಯಾಸ ನಡೆಯುತ್ತಿದ್ದರೆ ಹೊರಗೆ ಮಲ್ಲಿಗೆ ಗಿಡಗಳ ಕಂಪು ಶಾಲೆಯನ್ನು ಅಲಂಕರಿಸಿದೆ. ಈ ಮಲ್ಲಿಗೆ ಗಿಡ ನೆಟ್ಟದ್ದು ಶಾಲೆಯ ಅಲಂಕಾರಕ್ಕೆ ಅಲ್ಲ. ಈ ಶಾಲೆಯ ಗೌರವ ಶಿಕ್ಷಕಿಯರಿಗೆ ನೀಡುವ ವೇತನ ಭರಿಸಲು ಎನ್ನುವುದು ವಿಶೇಷ.
ಇಲ್ಲಿ ಇರುವ ಮಲ್ಲಿಗೆ ಗಿಡಗಳಿಂದ ದಿನಕ್ಕೆ ಒಂದು ಅಟ್ಟೆ ಮಲ್ಲಿಗೆ ಹೂಗಳು ಸಿಗುತ್ತದೆ . ಮಲ್ಲಿಗೆ ಹೂಗಳನ್ನು ಮುಂಜಾನೆ ಶಾಲೆ ಆರಂಭಕ್ಕೆ ಮುನ್ನ ವಿದ್ಯಾರ್ಥಿಗಳು ಶಿಕ್ಷಕರು ಕೊಯ್ದಿಟ್ಟರೆ ಶಾಲೆಯ ಸಿಬ್ಬಂದಿಯೊಬ್ಬರು ಅದನ್ನು ಪೋಣಿಸುತ್ತಾರೆ. ಹೀಗೆ ಮಲ್ಲಿಗೆ ಗಿಡಗಳಿಂದ ಸಿಗುವ ಹೂವನ್ನು ಹೂವಿನ ಅಂಗಡಿಗೆ ನೀಡುವ ಮೂಲಕ ವರುಷಕ್ಕೆ 40ರಿಂದ 50 ಸಾವಿರದವರೆಗೆ ಆದಾಯ ಬರುತ್ತದೆ. ಈ ಆದಾಯದಲ್ಲಿ ಮೂರು ಗೌರವ ಶಿಕ್ಷಕರ ಪೈಕಿ ಪೂರ್ವ ಶಿಕ್ಷಕಿಗೆ ವೇತನ ನೀಡಲು ಸಾಕಾಗುತ್ತದೆ. ಉಳಿದ ಶಿಕ್ಷಕರ ವೇತನಕ್ಕೆ ಬೇರೆ ಮೂಲಗಳನ್ನು ಅವಳ ಮೀಸಲಾಗುತ್ತದೆ ಎನ್ನುತ್ತಾರೆ ಓಜಾಲ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಗೌಡ ಅವರು.
ಶಾಲೆಯ ಇತರ ಶಿಕ್ಷಕರಿಗೆ ನೀಡುವ ವೇತನದ ಆದಾಯಕ್ಕಾಗಿ ಇನ್ನಷ್ಟು ಮಲ್ಲಿಗೆ ಗಿಡಗಳನ್ನು ನೀಡಬಹುದಾದರೂ ಅದರ ನಿರ್ವಹಣೆ ಕಷ್ಟ. ಆದುದರಿಂದ ಇತರ ಮೂಲದ ಆದಾಯವನ್ನು ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ ವಿಲ್ಮಾ ಸಿಕ್ವೇರಾ.
ಈ ಶಾಲೆಯಲ್ಲಿ ಸರಕಾರದ ಇಬ್ಬರು ಶಿಕ್ಷಕರಿದ್ದಾರೆ. ಇಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಇಬ್ಬರು ಶಿಕ್ಷಕರು ಸಾಲದು ಎಂದು ಮೂವರು ಗೌರವ ಶಿಕ್ಷಕರನ್ನು ನೇಮಿಸಿ ಅದಕ್ಕೆ ಬೇಕಾದ ಆದಾಯವನ್ನು ಶಾಲೆಯಲ್ಲಿ ಮಲ್ಲಿಗೆ ಗಿಡಗಳನ್ನು ನೆಡುವ ಮೂಲಕ ಮಾಡಿರುವ ಪ್ರಯತ್ನ ಶ್ಲಾಘನೀಯವಾದದ್ದು