ಮಂಗಳೂರು: ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಮರುಗಿದ ನಗರದ ವಿದ್ಯಾರ್ಥಿನಿಯೊಬ್ಬರು ತನ್ನ ಕೇಶಯನ್ನೇ ದಾನ ಮಾಡಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಬಿಎ ಎಲ್‌ಲ್‌ಬಿ ಕಲಿಯುತ್ತಿರುವ ಪವಿತ್ರಾ ಶೆಟ್ಟಿ ಎನ್ನುವ ವಿದ್ಯಾರ್ಥಿನಿ ಕ್ಯಾನ್ಸರ್ ಪೀಡಿತ ಮಕ್ಕಳ ಮುಖದಲ್ಲಿ ನಗು ಮೂಡಿಸುವುದಕ್ಕಾಗಿ ತನ್ನ ಕೂದಲು ದಾನ ಮಾಡಿದ್ದಾರೆ. ಮೂಲತಃ ಮಹಾರಾಷ್ಟ್ರದ ಕೊಲ್ಹಾಪುರದ ಪವಿತ್ರಾ ವ್ಯಾಸಂಗಕ್ಕಾಗಿ ನಗರದಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಅನಾರೋಗ್ಯದ ಚಿಕಿತ್ಸೆಗೆಂದು ಪವಿತ್ರಾ, ನಗರದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು.
ಅಲ್ಲಿ ವೈದ್ಯರಿಗೆ ಕಾಯುತ್ತಿದ್ದ ವೇಳೆ ಕೀಮೋಥೆರಪಿಗೆ ಬಂದಿದ್ದ ಇಬ್ಬರು ಪುಟ್ಟ ಮಕ್ಕಳು ಪವಿತ್ರಾ ಅವರನ್ನು ನೋಡಿ ನಿಮ್ಮ ಕೂದಲು ಚೆನ್ನಾಗಿದೆ ಎಂದು ಮುಟ್ಟಿದ್ದಾರೆ. ಇದರಿಂದ ಪವಿತ್ರಾ ಅವರಿಗೆ ತುಂಬಾ ನೋವುಂಟಾಯಿತು, ಮಕ್ಕಳ ಮುಖದಲ್ಲಿದ್ದ ಅಸಹಾಯಕತೆಯ ನೋವಿನಿಂದ ಬೇಸರವಾದರೂ ಮಕ್ಕಳ ಮುಂದೆ ನಸುನಗುತ್ತಾ ವೈದ್ಯರನ್ನು ಭೇಟಿಯಾಗಿ ವಾಪಸ್ ಬಂದಿದ್ದರು.
ಬಳಿಕ ಕ್ಯಾನ್ಸರ್ ಸೇವಾ ಸಂಸ್ಥೆಯನ್ನು ಸಂಪರ್ಕಿಸಿ ಕೇಶದಾನ ಬಗ್ಗೆ ಚರ್ಚಿಸಿ ಕಳೆದ ವಾರ ತಮ್ಮ 18 ಇಂಚು ಉದ್ದದ ಕೂದಲನ್ನು ದಾನ ಮಾಡಿದರು. ಕೂದಲು ಮಹಿಳೆಯರ ಸೌಂದರ್ಯ ಕ್ಕೆ ಮುಖ್ಯ ಹೌದು, ಆದರೆ ಕ್ಯಾನ್ಸರ್ ಪೀಡಿತ ಮಕ್ಕಳ ಮೊಗದಲ್ಲಿ ನಗು ಮೂಡಿಸುವುದರಲ್ಲಿರುವ ಖುಷಿ ಬೇರಿಲ್ಲ. ತಾಯಿಯೊಂದಿಗೆ ಮಾತನಾಡಿ ಕೇಶದಾನ ಮಾಡಿದೆ. ಈ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಬೇಕಾಗಿದೆ ಎಂದು ಪವಿತ್ರಾ ಹೇಳುತ್ತಾರೆ.