ಕಳೆದ ಕೆಲವು ವರ್ಷಗಳಿಂದೀಚೆಗೆ ಹಲಸು ಪ್ರಿಯರು ದೇಶಾದ್ಯಂತ ಹಲಸಿನ ಮೌಲ್ಯವರ್ಧನೆ ಹಾಗೂ ಸಂರಕ್ಷಣೆಗಾಗಿ ಹೊಸ ಹೊಸ ಆವಿಷ್ಕಾರ ಮಾಡುತ್ತಿದ್ದಾರೆ. ಅದರಲ್ಲಿ ಬಂಟ್ವಾಳ ತಾಲೂಕಿನ ವಿಟ್ಲದವರಾದ ಪ್ರಸ್ತುತ ಚೆನ್ನೈಯಲ್ಲಿ ನೆಲೆಸಿರುವ ಅಪರ್ಣಾ ಹರೀಶ್, ತಾವೇ ಸ್ವತಃ ಹಲಸಿನ ಹಣ್ಣಿನಿಂದ ಸೋಪ್ ತಯಾರಿಸಿ ಎಲ್ಲೆಡೆಯಿಂದ ಭೇಷ್ ಎನ್ನಿಸಿಕೊಂಡಿದ್ದಾರೆ.
ಒಂದು ವರ್ಷದಿಂದ ಪ್ರಯೋಗ ಮಾಡಿಕೊಂಡು ಸೋಪ್ ತಯಾರಿಸಿದ್ದಾರೆ. ಸೋಪ್ ತಯಾರಿಸುವಾಗ ಹಲಸಿನ ಹಣ್ಣು, ಕ್ಯಾಲಮಿನ್ ಪೌಡರ್, ತೆಂಗಿನೆಣ್ಣೆ, ಹರಳೆಣ್ಣೆ ಬಳಸಿದ್ದಾರೆ. ಹಲಸಿನ ಬೀಜ ಬಳಸಿಲ್ಲ. ಈ ಸೋಪ್‌ನಲ್ಲಿ ವಿಟಮಿನ್ ಸಿ ಮತ್ತು ಡಿ ಇದ್ದು, ಸೋರಿಯಾಸಿಸ್ ಅಥವಾ ಚರ್ಮದ ಕಾಯಿಲೆ ವಾಸಿಗೆ ಅತ್ಯುತ್ತಮ ಮದ್ದು ಎನ್ನುವುದು ಅವರ ಮಾತು.
ಹಲಸಿನ ಹಣ್ಣಿನ ಶ್ಯಾಂಪೂ, ಪೌಡರ್ ಮಾಡಬೇಕು ಎಂಬ ಪ್ಲ್ಯಾನ್ ಇಟ್ಟುಕೊಂಡಿರುವ ಅಪರ್ಣಾ, ಚರ್ಮದ ಸೌಂದರ್ಯಕ್ಕಾಗಿ ಕೆಲವೊಂದು ಸೌಂದರ್ಯವರ್ಧಕ ಉತ್ಪನ್ನ ತಯಾರಿಸುವಲ್ಲಿ ನಿರತರಾಗಿದ್ದಾರೆ. ತಾನು ತಯಾರಿಸಿದ ಸೋಪ್‌ಗೆ ‘ಝ್ಯ’ ಎಂದು ಹೆಸರಿಟ್ಟಿದ್ದಾರೆ. ಹಲಸಿನ ಹಣ್ಣಿನ ಶ್ಯಾಂಪೂ ಯಾವ ರೀತಿ ಕೂದಲಿನ ಸೌಂದರ‍್ಯ ಇಮ್ಮಡಿಗೊಳಿಸಲು ನೆರವಾಗುತ್ತದೆ ಎಂಬ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಅದಾದ ಬಳಿಕ ಟಾಲ್ಕಂ ಪೌಡರ್ ಆವಿಷ್ಕಾರ ಮಾಡುವತ್ತ ಮುನ್ನಡೆಯಲಿದ್ದಾರೆ.